ಕೊಳಲ ರಾಗ

ಯಾರೋ ಏನೋ ಕಾಣೆ ಅವನು
ನುಡಿಸುತಿರುವ ಕೊಳಲನು
ಯಾವುದೋ ರಾಗ ಅರಿಯೆ
ಸೆಳೆಯುತಿಹುದು ನನ್ನನು

ಮಧುರ ಸ್ವರವು ತೇಲಿ ಬಂದು
ಇಂಪು ತುಂಬಿ ಕಿವಿಯನು
ತಂಪನೀಯ್ದು ತಣಿಸುತಿದೆ
ದಣಿದ ಎನ್ನ ಮನವನು

ಹೊಸಹರುಷ ಹೊಮ್ಮಿ ಇಂದು
ಹಗುರ ಭಾವ ಕಂಡೆನು
ನನ್ನ ನಾನೆ ಮೈಯ್ಯ ಮರೆತು
ತಲೆಯ ತೂಗುತಿರುವೆನು 

ಸಾಗುವ ನದಿ

ಗಿರಿಯಲಿ ಹುಟ್ಟಿ ಕಡಲಲಿ ಬೆರೆಯಲು
ನದಿಯದು ನೋಡು ಓಡುತಿದೆ
ಝರಿಯಲಿ ಹರಿದು ತೊರೆಯಲಿ ಬೆರೆತು
ಸುಮಧುರ ಗಾನವ ಗೈಯ್ಯುತಿದೆ

ಬಾಗುತ ಬಳುಕುತ ಜಿಗಿಯುತ ಸಾಗಿ
ಜಲಪಾತವ ತಾ ಸೃಜಿಸುತಿದೆ
ಜೀವಸಂಕುಲದ ದಾಹವ ತೀರಿಸಿ
ಜೀವದ ಸೆಲೆ ಎಂದೆನಿಸುತಿದೆ

ಬಣಬಣಗುಡುವ ಒಣಬಯಲಲ್ಲಿ
ಹಸಿರನು ಉಕ್ಕಿಸಿ ನಗಿಸುತಿದೆ
ಸಾಗುವ ಹಾದಿಯ ಇಕ್ಕೆಲದಲ್ಲೂ
ಹೊಸ ಇತಿಹಾಸವ ಬರೆಯುತಿದೆ 

ನಸುಕಿನ ಕನಸು

ಹೊತ್ತುಮೂಡುವ ಮುನ್ನಾ ಜಾವದಲಿ
ಬಿತ್ತೊಂದು ಮುತ್ತಿನಂತಹ ಕನಸು
ಒತ್ತಿ ಮಲಗಿದಂತೆ ಮೆತ್ತನೆ ಮೈಯವಳು
ಚಿತ್ತಾರದ ಹಾಸಿಗೆಯಲಿ ಹೆರಳ ಹರಡಿ

ಮೈಯ್ಯ ತುಂಬ ಬಯಕೆ ಬಳ್ಳಿ ಹಬ್ಬುತಿರಲು
ಕೊರೆವ ನಸುಕಿನ ಚಳಿಯಲೆನ್ನ ಬರಸೆಳೆದು
ಎದೆಗೆ ಎದೆಯೊತ್ತಿ ಮುತ್ತಿನಾ ಮಳೆಗರೆದು
ಮಗ್ಗುಲಲಿ ತಬ್ಬಿದಂತೆ ನನ್ನ ಬಿಗಿದಿಡಿದು

ಎಚ್ಚೆತ್ತು ನೋಡಿದರೆ ಸುತ್ತೆಲ್ಲೂ ಕಾಣಳಲ್ಲ
ಅತ್ತಿತ್ತ ತಡವಿದರೂ ಕೈಯ್ಯೊಳಗೆ ಸಿಗುತಿಲ್ಲ
ಎತ್ತಹೋದಳೋ ಹುಡುಗಿ ಚಿತ್ತವ ಬದಲಿಸಿ
ಹೊತ್ತಲ್ಲದ ಹೊತ್ತಲೆನ್ನ ಮನವ ಕದಲಿಸಿ

ಹೊದ್ದು ಮಲಗಿದೆ ನಾನು ಕಲ್ಲು ಕರಗುವ ವೇಳೆ
ನಡುಗಿಸುವ ಚಳಿಗೆ ಹಲ್ಲು ಕಟಕಟನೆ ಕಡಿದು
ಮೂಡಣದ ಆಗಸದಿ ಹೊಂಗಿರಣ ಹಬ್ಬುತಿರೆ
ಮಬ್ಬಿನಲಿ ಬಿದ್ದ ಕನಸನೇ ಮತ್ತೆ ಮತ್ತೆ ನೆನೆದು 

ಶಾಕುಂತಲೆ..!?

ಯಾರೇ ನೀ ಹೂವುಡುಗೆ ತೊಟ್ಟವಳೆ
ಕೋಮಲ ಕುಸುಮಬಾಲೆ...
ನೀನಹುದೆ ಶಾಕುಂತಲೆ?

ಮೊಗ್ಗೊಡೆದ ವನಸುಮರಾಣಿ
ಗಂಧದೊಡಲ ಪುಷ್ಪವೇಣಿ
ಚೆಲುವೇ ಮೇಳೈಸಿ ನಗುವ
ಸುಮದಾಭರಣ ಧಾರಿಣಿ

ಹೂವಿನುಂಗುರ ತೋರುಬೆರಳಲಿ
ಅರಳಿ ಪಾರಿಜಾತ ಕಿವಿಯಲಿ
ದುಂಡುಮೊಲ್ಲೆ ಹಾರ ಕೊರಳಲಿ
ಕೆಂಡಸಂಪಿಗೆ ಬೈತಲೆಯಲಿ

ಕೆಂಪುಕೆನ್ನೆಯ ಕನ್ನೆ ಕೆನ್ನೈದಿಲೆ
ಪುಷ್ಪದೊಡವೆಗೆ ಮನಸೋತವಳೆ
ಎನ್ನ ಲೇಖನಿಯಲಿ ಮೂಡಿ
ಕವಿತೆಯಾಗಿ ನಿಂದವಳೆ 

ಭಾವಿಸಿರಲಿಲ್ಲ

ಭಾವಿಸಿರಲಿಲ್ಲ ನೀನು ಬರುವವರೆಗೆ
ಒಲವು ಹೀಗಿರಬಹುದೆಂದು
ಬದುಕು ಬದಲಾಗಬಹುದೆಂದು

ಬಿಸಿಲಿಗೆ ಬಾಯ್ದೆರೆದು ನಿಂತ
ಬರಡು ಭುವಿಗೆ ನೀರೆರೆದು
ಒಣಗಿದ ಕೊರಡುಗಳಲಿ
ಹಸಿರ ಚಿಗುರಿಸಬಹುದೆಂದು

ಬಳಲಿ ಬೇಸರಿಸಿ ಸವೆದ
ಒಂಟಿ ಬಾಳಿಗೆ ಜತೆಬೆಸೆದು
ಚೈತನ್ಯವಿರದ ದೇಹದೊಡಲಿಗೆ
ಬಿಸಿಯ ಉಸಿರಾಗಬಹುದೆಂದು

ಕಮರಿದ ಕುಸುಮಕೆ ಹನಿ
ಹನಿಯ ರಸದ ಒಲವೆರೆದು
ಮುದುಡಿದ ಜೀವನವರಳಿಸಿ
ಜೀವಕಳೆ ತುಂಬಬಹುದೆಂದು 

ಗಾನಗಂಧರ್ವ

ಯಾವ ದೇವನೊಲಿದನೋ ನಿನ್ನ ನಾಲಗೆಯಲಿ
ಗಾನದೇವಿ ನೆಲೆಸಿದಳೋ ಕೊರಳಿನಲಿ
ಗಾನಗಂಧರ್ವ ನಿನ್ನನುಪಮ ಗೀತೆಗೆ ಮರುಳಾದೆನೋ

ನಾದಾಮೃತದ ನಿತ್ಯಕಛೇರಿ ನೀನುಲಿದಿರಲು
ರಾಗಪಾಡುತಿರೆ ರಸ ಹೊಮ್ಮುವ ಕಡಲು
ಮಧುರಕಂಠದ ಸ್ವರಸಂಚಾರಕೆ ಬೆರಗಾದೆನೋ

ಕರ್ಣಾನಂದವಿದು ಸುಶ್ರಾವ್ಯದಾಲಾಪ
ಶುದ್ಧಶೃತಿ ಲಯತಾಳಗಳ ಲೇಪ
ಭಾವಗಾನದ ನಾದಲಹರಿಗೆ ಮನಸೋತೆನೋ 

ಧರ್ಮದ ದೇವರು

ಧರ್ಮದ ದೇವರು ಎಲ್ಲೆಡೆಯೂ ನೆಲೆಸಿದ್ದಾನೆ
ಮಂದಿರ ಮಸೀದಿ ಚರ್ಚು ದರ್ಗಾ
ಮಠ ಬಸದಿ ಗುರುದ್ವಾರ ಎಲ್ಲೆಲ್ಲೂ
ಕಲಿಗಾಲದ ನೆಲದಲ್ಲಿ ಅಳಿವಿಲ್ಲದಂತೆ
ಅವನನ್ನು ಮಾನವ ಯೋಜಿತ ಮತಗಳ
ಸಂಕೋಲೆಗಳು ಬಂಧಿಸುವುದಿಲ್ಲ
ಎಲ್ಲಿ ಬೇಕಿದ್ದರೂ ನಿರ್ಭಯವಾಗಿ ಸಾಗಬಲ್ಲ
ಧರ್ಮದ ದಂಡವನ್ನು ಕೈಯ್ಯಲ್ಲಿ ಹಿಡಿದು

ಇಂದು ಮಹಲುಗಳ ಸರ್ವಾಲಂಕಾರಿತ
ದೇವರಕೋಣೆಯಲ್ಲಾದರೆ... ನಾಳೆ,
ಕೊಳಕು ಜೋಪಡಿಯಲ್ಲಿ, ಪಾಳುಗುಡಿಗಳಲ್ಲಿ
ನೆಲೆಸುವನು ಎಂದಿನಂತೆಯೇ ಮಂದಸ್ಮಿತನಾಗಿ
ಇಲ್ಲಿ ಗೆಡ್ಡೆಗೆಣಸುಗಳನ್ನು ತಿಂದು ಸಂತುಷ್ಟನಾಗಿ
ಅಲ್ಲಿ ಪಾಯಸಪಾನಕಗಳ ಹೀರುವನು ಭೇದವಿಲ್ಲದೇ
ಏನು ಕೊಟ್ಟರು, ಯಾರು ಕೊಟ್ಟರೆಂಬ ವಿಚಾರಕ್ಕಿಂತ
ಹೇಗೆ ತಂದರೆಂಬುದಷ್ಟೇ ಮುಖ್ಯ: ಧರ್ಮದ ದೇವರಿಗೆ

ಭಕ್ತಿಯಿಂದ ಮಸೀದಿಯಲ್ಲಿ ಮೇಣದಬತ್ತಿ ಹಚ್ಚಿದರೂ
ಚರ್ಚಿನಲ್ಲಿ ದೀರ್ಘದಂಡ ಹಾಕಿದರೂ
ಮಂದಿರದಲ್ಲಿ ಪ್ರಾರ್ಥಿಸಿದರೂ ಒಲಿಯುತ್ತಾನೆ
ಎಲ್ಲಿದ್ದರೂ ಪಾಪ-ಪುಣ್ಯ ದಯೆ-ಧರ್ಮ ಸತ್ಯ-ಸುಳ್ಳಿನ
ನಿರಂತರ ತುಲನೆ ಮಾಡುತ್ತಲೇ ಇರುತ್ತಾನೆ 
ಒಂದೊಂದು ಮತಕ್ಕೂ ಒಂದೊಂದು ವೇಷವಿಲ್ಲ
ನಾವು ತೊಡಿಸಿದ ವಸ್ತ್ರ ಬೇಡವೆನ್ನುವುದಿಲ್ಲ
ಧರ್ಮದ ದೇವರಿಗೆ ಹಲವಾರು ಮುಖಗಳಿಲ್ಲ 

ದೇವರಿದ್ದಾನೆ

ದೇವರಿದ್ದಾನೆ... ಹೌದು...
ಅಲ್ಲೆಲ್ಲೋ ದೂರದಲ್ಲಲ್ಲ
ಇಲ್ಲೇ ನಮ್ಮ ಸುತ್ತ ಸುಳಿದಾಡುತ್ತಾ
ನಮ್ಮ ಪ್ರತಿ ನಡೆಯನ್ನು
ಕೂಲಂಕುಷವಾಗಿ ಅವಲೋಕಿಸುತ್ತಾ...

ಅಂದುಆಡಿದ್ದಕ್ಕೆ ಬೈದುಬಯಸಿದ್ದಕ್ಕೆ
ಪಾಪಪುಣ್ಯಗಳ ಲೆಕ್ಕವಿರಿಸುತ್ತಾ
ಸಮಯ ಬಂದಾಗ ಲೆಕ್ಕತಪ್ಪಿಸದೇ
ಹಿಂದಿರುಗಿಸುತ್ತಾ...

ಅವನ ಲೆಕ್ಕ ಎಳ್ಳಷ್ಟೂ ತಪ್ಪುವುದಿಲ್ಲ
ಯರುಯಾರಿಗೆ ಎಷ್ಟು ಸಲ್ಲಬೇಕೋ
ಅಷ್ಟೇ ಅನುದಾನ ಅನುಕಂಪ
ಸತ್ಕಾರ್ಯಕ್ಕೆ ಕೇಳದೆಯೇ ಸಲ್ಲುವುದು ಕಪ್ಪ

ಧರ್ಮದ ದೇವರಿಗೆ ಜಾತಿಮತಗಳ ಹಂಗಿಲ್ಲ
ಹುಸಿ ಮುಖವಾಡಗಳ ಸೋಗಿಲ್ಲ
ಅರಿವಿರದೆ ತಪ್ಪಿದರೆ ಕ್ಷಮೆಯಿಹುದಲ್ಲದೇ
ತಪ್ಪಿ ನಡೆದರೆ ಶಿಕ್ಷೆಯ ರಿಯಾಯಿತಿ ಇಲ್ಲ. 

ಇಂದು ಬರುವೆಯಾ ತಂದೆ

ಇಂದು ಬರುವೆಯಾ ತಂದೆ ಶ್ರೀಹರಿಯೇ ಗೋವಿಂದ
ಎಂದು ಕಾಯುತಲಿರುವೆ ಮುಖತೋರೋ ಮುಕುಂದ

ಅಂದ ಕಣ್ತುಂಬಿಕೊಳಲು ಕಾತರಿಸಿರುವೆ
ನಂದಗೋಪಾಲ ನಿನ್ನ ಲೀಲೆ ಪಾಡಿರುವೆ
ಚಂದದಾಟವನಾಡಿ ನಗುತ ಎನ್ನೆಡೆಗೆ
ಕಂದನಂದದಿ ನಲಿದೊಲಿದು ಬಾರಯ್ಯಾ

ಇಂಗದ ಯಾತನೆ ಎಂದಿಗೆ ಮುಗಿವುದೋ
ಭಂಗದ ಜೀವನ ಎತ್ತಣ ನಡೆವುದೋ
ರಂಗ ನಿನ್ನಂದವ ಕಾಣದೆ ಎನಗೆ ಜಗದ
ಸಂಗದೊಳಿನಿತೂ ಸೊಗಸಿಲ್ಲ ಸುಖವಿಲ್ಲ 

ರಾಗಿ ವನೆಯಿರಮ್ಮ

ವನೆಯಿರಮ್ಮ ರಾಗಿಯ ವನೆಯಿರಮ್ಮಾ
ವನೆವನೆದು ಮನದ ರಾಗಿಯ ಶುಧ್ಧಿ ಮಾಡಿರಮ್ಮ

ತೊನೆದು ತೂಗುವ ಹೊಲದ ರಾಗಿಯ
ತೆನೆಕೊಯ್ದು ಮನದಂಗಳದಿ ಸುರಿದು
ಕೊನೆಯಿರದವನ ನಾಮವ ನೆನೆಯುತ
ಮನೆಯ ಮಾಡಿ ಮನದೊಳು ಜಪಿಸುತ

ತನುವ ತೂಗಿಸಿ ಬಾಗಿಸಿ ಅವನದೆಲ್ಲವು
ಎನುತ ಕಲ್ಮಷದ ಕಲ್ಲರಳ ಆಯ್ದೆಸೆದು
ಅನುರಾಗದವರಾಗಿ, ಐಭೋಗದವರಾಗಿ
ಅನುಗಾಲ ಅವನ ತಪಗೈದವರಾಗಿ